ನಿಮ್ಮ ತ್ವಚೆಯ ಆರೈಕೆ

ಮುಖ ತೊಳೆಯಲು ಸಲಹೆಗಳು

1. ಮುಖವನ್ನು ಪದೇ ಪದೇ ತೊಳೆಯಬೇಡಿ: ಮುಖವನ್ನು ದಿನಕ್ಕೆ 2-3 ಸಲ ತೊಳೆದರೆ ಸಾಕಾಗುತ್ತದೆ. ಪದೇ ಪದೇ ತೊಳೆಯುವುದರಿಂದ ಚರ್ಮವು ಒಣಗಿ ಬಿರುಸಾಗುವ ಮತ್ತು ಮೊಡವೆಗಳಾಗುವ ಸಾಧ್ಯತೆಯು ಹೆಚ್ಚುತ್ತದೆ. ಅಷ್ಟೇ ಅಲ್ಲ, ಚರ್ಮದ ಗ್ರಂಥಿಗಳು ಇನ್ನಷ್ಟು ಎಣ್ಣೆಯಂಶವನ್ನು ಸ್ರವಿಸುವುದರಿಂದಾಗಿ, ಮೊಡವೆಗಳಾಗುವ ಸಾಧ್ಯತೆಯು ಹೆಚ್ಚುತ್ತದೆ.

2. ಬಲಶಾಲಿಯಾದ ಸಾಬೂನುಗಳು (ಬ್ಯಾಕ್ಟೀರಿಯಾನಾಶಕ) ಮತ್ತು ಕ್ಲೆನ್ಸರ್ ಗಳನ್ನು ಬಳಸಬೇಡಿ: ಬಾರ್‍ಸೋಪುಗಳು ಮತ್ತು ಬಾರ್ ಕ್ಲೆನ್ಸರ್‍ಗಳು ನಿಮ್ಮ ಚರ್ಮಕ್ಕೆ ಹಾನಿಯುಂಟುಮಾಡುತ್ತವೆ ಮತ್ತು ಚರ್ಮದ ರಂಧ್ರಗಳನ್ನು ಮುಚ್ಚುತ್ತವೆ. ಮೃದುವಾದ, ಮೊಡವೆಗಳನ್ನುಂಟುಮಾಡದ, ಅಲರ್ಜಿಯನ್ನುಂಟುಮಾಡದ ಕ್ಲೆನ್ಸರ್ ಗಳನ್ನೇ ಆಯ್ದುಕೊಳ್ಳಿರಿ.

3. ಕ್ಲೆನ್ಸರ್ ಗಳನ್ನು ಅತಿಯಾಗಿ ಬಳಸಬೇಡಿ: ತೊಳೆಯುವಾಗ ಕ್ಲೆನ್ಸರ್ ಅನ್ನು ಸಾಕಷ್ಟು ನೀರಿನೊಂದಿಗೆ ಬೆರೆಸಿರಿ. ಮೃದುವಾದ ಕ್ಲೆನ್ಸರ್ ಅನ್ನು ಬಳಸುವುದಿದ್ದರೂ ಅದನ್ನು ನೀರಿನೊಂದಿಗೆ ಬೆರೆಸುವುದು ಒಳ್ಳೆಯದು (ಅಂಗೈಯಲ್ಲಿ ಹಿಡಿಯುವಷ್ಟು ಕ್ಲೆನ್ಸರ್ ಸಾಕು). ಕ್ಲೆನ್ಸರ್ ಸಾಂದ್ರತೆಯು ಕಡಿಮೆಯಿದ್ದಷ್ಟೂ ನಿಮ್ಮ ಮುಖಕ್ಕೆ ಒಳ್ಳೆಯದು.

4. ಆಲ್ಕೋಹಾಲ್ (ಸ್ಪಿರಿಟ್) ಇರುವ ಕ್ಲೆನ್ಸರ್ ಅನ್ನು ಬಳಸಬೇಡಿ: ಟೋನರ್‍ಗಳು ಹಾಗೂ ಅಸ್ಟ್ರಿಂಜೆಂಟ್‍ಗಳನ್ನು ಬಳಸುವಾಗ ಹಿತಕರವಾದ ಅನುಭವವಾದರೂ, ಅವುಗಳ ಅತಿಯಾದ ಬಳಕೆಯಿಂದ ತ್ವಚೆಗೆ ಹಾನಿಯಾಗಬಹುದು! ಆಲ್ಕೋಹಾಲ್ ನಿಮ್ಮ ಮುಖದ ಸಹಜವಾದ ತೈಲಾಂಶವನ್ನು ಏರುಪೇರು ಮಾಡುವುದರಿಂದ, ತ್ವಚೆಗೆ ಹಾನಿಯಾಗುತ್ತದೆ.

5. ಯಾವುದೇ ಉತ್ಪನ್ನವನ್ನು ಹಾಗೇನೇ ಬಳಸಬೇಡಿ: ನಿಮ್ಮ ಚರ್ಮದ ಮೇಲೆ ಏನನ್ನೇ ಬಳಸುವ ಮೊದಲು ನಿಮ್ಮ ಚರ್ಮದ ವಿಧ ಹಾಗೂ ಅಂತಹ ಉತ್ಪನ್ನಗಳ ಬಗ್ಗೆ ಅರಿತುಕೊಳ್ಳಿ. ಒಣ ಚರ್ಮವಿದ್ದರೆ ಗ್ಲಿಸರಿನ್‍ಯುಕ್ತವಾದ ಮೃದುವಾದ ಸೋಪುಗಳನ್ನು ಬಳಸಿರಿ. ಮೊಡವೆಗಳಿಗೆಂದು ಮಾರುವ ಸೋಪುಗಳಲ್ಲಿ ಬೆಂಜೈಲ್ ಪೆರಾಕ್ಸೈಡ್ ಅಥವಾ ಸಾಲಿಸಿಲಿಕ್ ಆಮ್ಲಗಳಿರುವುದರಿಂದ, ಅವುಗಳ ಅತಿ ಬಳಕೆಯಿಂದ ತ್ವಚೆಯು ಅತಿಯಾಗಿ ಒಣಗಬಹುದು.

6. ಸಾಕಷ್ಟು ನೀರಿನಲ್ಲಿ ತೊಳೆಯಿರಿ: ಹಾಗೇ ಬಿಟ್ಟ ಉಳಿಕೆಗಳು ಚರ್ಮದ ರಂಧ್ರಗಳನ್ನು ಮುಚ್ಚಬಹುದು.

7. ಪದೇ ಪದೇ ಮೇಲ್ಚರ್ಮವನ್ನು ತೆಗೆಯಬೇಡಿ: ತ್ವಚೆಯ ಮೇಲ್ಪದರವನ್ನು ತೆಗೆದು ಸ್ವಚ್ಛಗೊಳಿಸುವ ನೆಪದಲ್ಲಿ ಸ್ಕ್ರಬ್‍ಗಳನ್ನು ಅತಿಯಾಗಿ ಬಳಸಿದರೆ ತ್ವಚೆಯು ದೊರಗಾಗಿ ಅಂದಗೆಡುತ್ತದೆ. ಅಂತಹ ಸ್ಕ್ರಬ್ ಗಳನ್ನು ಬಳಸದಿರುವುದೇ ಲೇಸು!

8. ಟವೆಲ್‍ನಿಂದ ಮುಖವನ್ನು ತಿಕ್ಕಬೇಡಿ: ತೊಳೆದಾದ ಬಳಿಕ ಟವೆಲ್‍ನಿಂದ ಮುಖವನ್ನು ಮೃದುವಾಗಿ ಒತ್ತಿ ನೀರನ್ನು ತೆಗೆಯಿರಿ.

ನೆನಪಿಡಿ! ನೀವೇನು ಮಾಡುವುದಿದ್ದರೂ ಸರಳವಾದ, ಸುಲಭವಾದ ವಿಧಗಳನ್ನೇ ಬಳಸಿರಿ.
ನಿಮ್ಮ ತ್ವಚೆಯ ಮೇಲೆ ಹರಿಹಾಯಬೇಡಿ; ತಾಳ್ಮೆಯಿಂದ, ಮೃದುವಾಗಿ ವರ್ತಿಸಿ.
ಸದಾ ನಿಮ್ಮ ಅತ್ಯುತ್ತಮವಾದ ವದನವೇ ಮುಂದೆ ಬರಲಿ!